ಬಾನಾಮತಿ ಎಂಬ ಕ್ಷುದ್ರ ಶಕ್ತಿ ಪ್ರಯೋಗ ನಡೆದಿದೆ ಎಂದಾಕ್ಷಣ ವಿಪರೀತ ಕುತೂಹಲ ಪ್ರತಿಯೊಬ್ಬರಲ್ಲೂ ಹುಟ್ಟಿಬಿಡುತ್ತದೆ. ದೊಡ್ಡ ದೊಡ್ಡ ವಿಜ್ಞಾನಿಗಳಿಂದ ಹಿಡಿದು ಆಸ್ತಿಕರು, ನಾಸ್ತಿಕರು, ಹಾಗೂ ಪವಾಡ ಬಯಲು ಮಾಡುವವರ ವರೆಗೆ ಎಲ್ಲರೂ ಬಾನಾಮತಿ ಕ್ಷುದ್ರ ಶಕ್ತಿ ಪ್ರಯೋಗ ನಡೆದ ಸ್ಥಳಕ್ಕೆ ದೌಡಾಯಿಸಿಬಿಡುತ್ತಾರೆ. ಇವರೆಲ್ಲರೂ ತಮ್ಮ ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಬಾನಾಮತಿ ಕ್ಷುದ್ರ ಶಕ್ತಿಯನ್ನು ಭೇದಿಸುವ ಮಹಾ ಕಾರ್ಯದಲ್ಲಿ ತೊಡಗುತ್ತಾರೆ. ಬಾನಾಮತಿ ಶಕ್ತಿ ಪ್ರಯೋಗದ ಸಾಮರ್ಥ್ಯ ಎಂತದ್ದು? ಬಾನಾಮತಿ ಶಕ್ತಿ ಪ್ರಯೋಗವನ್ನು ಮಾಡಲು ನಿಜವಾಗಲೂ ಸಾಧ್ಯವಾಗುತ್ತದಾ? ಬಾನಾಮತಿ ಶಕ್ತಿಯಿಂದ ಏನೆಲ್ಲಾ ಅನಾಹುತಗಳಾಗುತ್ತವೆ? ಬಾನಾಮತಿಯ ಕುರಿತಾದ ಇಂತಹ ಅನೇಕ ಅಂಶಗಳು ಮೇಲೆ ರೋಮಾಂಚನಕಾರಿಯಾದ ಕಥೆಗಳು ಹುಟ್ಟಿಕೊಂಡಿವೆ ಹಾಗೂ ನಮ್ಮ ಪೂರ್ವಜರಿಂದ ಬಾನಾಮತಿಯ ಕುರಿತಾದ ಅನೇಕ ವಿಚಾರಗಳು ಬಾಯಿಂದ ಬಾಯಿಗೆ ಹರಿಯುತ್ತಾ ಕಿರಿಯರನ್ನು ತಲುಪಿವೆ. 13/4/1980 ರಂದು ಕನ್ನಡ ಪ್ರಭ ಪತ್ರಿಕೆಯ ಭಾನಾಮತಿಯ ಕುರಿತು ಪ್ರಕಟ ಮಾಡಿದರೆ ಪ್ರಜಾವಾಣಿ ಪತ್ರಿಕೆಯು 11/01/1981ರಂದು ಬಾನಾಮತಿ ಕುರಿತು ಅರ್ಥಗರ್ಭಿತವಾದ ವಿಚಾರಗಳನ್ನು ಪ್ರಕಟ ಮಾಡಿ ನಾಗರಿಕರಲ್ಲಿ ಮಾಟ ಮಂತ್ರದ ಕುರಿತು ಆಸಕ್ತಿಯನ್ನು ಹುಟ್ಟಿಸಿತ್ತು. ಆದರೆ 1980ರ ದಶಕದ ನಂತರ ಮಾಟ ಮಂತ್ರ ಹಾಗೂ ಬಾನಾಮತಿ ಅಂತಹ ಕ್ಷುದ್ರ ಶಕ್ತಿ ಸಾಧನೆಗಳು ಕ್ಷೀಣಿಸುತ್ತಾ ಕ್ಷೀಣಿಸುತ್ತಾ ಹೋಗಿ ಕಟ್ಟಕಡೆಗೆ ಇವತ್ತು ಕಣ್ಮರೆಯಾಗುವ ಹಂತವನ್ನು ತಲುಪಿವೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಆದರೂ ಕೂಡ ಪಶ್ಚಿಮ ಬಂಗಾಳಕ್ಕೆ ಹತ್ತಿರವಿರುವ ತಾರಾಪೀಠದಲ್ಲಿ ಹಾಗೂ ಅಸ್ಸಾಮಿನ ಗೌಹಾತಿಯ ಕಾಮಕ್ಯಾ ದೇವಸ್ಥಾನದ ಅಕ್ಕಪಕ್ಕದಲ್ಲಿ ಮತ್ತು ಅಸ್ಸಾಮಿನಲ್ಲಿ ಹರಿದು ಹೋದ ಬ್ರಹ್ಮಪುತ್ರ ನದಿಯ ದಡದಲ್ಲಿರುವ ಮಯಾಂಗ ಎಂಬ ಹಳ್ಳಿಯಲ್ಲಿ ಮಾಟ ಮಂತ್ರಗಳನ್ನು ಮಾಡಬಲ್ಲ ಬಲಿಷ್ಟ ಮಾಂತ್ರಿಕರು ಹಾಗು ತಾಂತ್ರಿಕರು ಇವತ್ತಿಗೂ ಇದ್ದಾರೆ. ಈ ಮಯಾಂಗ ಹಳ್ಳಿಯು ಲ್ಯಂಡ ಆಫ್ ಬ್ಲಾಕ್ ಮ್ಯಾಜಿಕ್ ಎಂದು ಪ್ರಸಿದ್ಧಿ ಪಡೆದಿದೆ. ಇದೆ ರೀತಿ ದಕ್ಷಿಣ ಭಾರತದಲ್ಲಿ ಕೇರಳ ಮತ್ತು ಆಂಧ್ರಪ್ರದೇಶದ ವೇಸ್ಟ್ ಗೋದಾವರಿ ಜಿಲ್ಲೆಯ ಒಳಭಾಗದಲ್ಲಿರುವ ನೀಡದವೊಳೆ, ಚುಂಗಲಿ, ನರ್ಮಿ, ಜೇನು ಹಾಗೂ ಮುಂತಾದ ಹಳ್ಳಿಗಳಲ್ಲಿ ಅಲ್ಪಸ್ವಲ್ಪ ವಾಮ ವಿದ್ಯೆಯನ್ನು ಕಲಿತ ಮಾಂತ್ರಿಕರು ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವ ಮಾಂತ್ರಿಕ ಅಸಲಿ ಹಾಗೂ ಯಾವ ಮಾಂತ್ರಿಕ ನಕಲಿ ಎಂದು ಗುರುತು ಹಿಡಿಯುವುದು ಅತ್ಯಂತ ಕಷ್ಟಕರವಾಗಿದೆ. ಜ್ಯೋತಿಷಿಗಳ ರೀತಿ ಸೋಗು ಹಾಕಿ ಜಾಹೀರಾತುಗಳನ್ನು ಕೊಟ್ಟುಕೊಂಡು ಯಂತ್ರ, ಮಂತ್ರ, ತಂತ್ರದ ಮೂಲಕ ಇಪ್ಪತ್ನಾಲ್ಕು ಗಂಟೆಗಳ ಒಳಗೆ ಏನೇ ಸಮಸ್ಯೆಗಳಿದ್ದರೂ ಪರಿಹಾರ ಮಾಡುತ್ತೇವೆಂದು ದುಡ್ಡು ಕಿತ್ತುಕೊಳ್ಳುವ ಅರೆಬರೆ ವಿದ್ಯೆ ಕಲಿತ ನಕಲಿ ಮಂತ್ರವಾದಿಗಳ ಸಂಖ್ಯೆ ಅತಿ ಹೆಚ್ಚು ಇದೆ. ಅಸಲಿಗೆ ಮಾಂತ್ರಿಕತೆ ಹಾಗೂ ಜ್ಯೋತಿಷ್ಯ ಇವೆರಡು ಬೇರ ಬೇರೆ ವಿದ್ಯೆಗಳು. ಅರೆಬರೆ ಮಾಂತ್ರಿಕ ವಿದ್ಯೆಯನು ಕಲಿತ ನಕಲಿ ಮಾಂತ್ರಿಕರು ಜ್ಯೋತಿಷಿಗಳ ವೇಷದಲ್ಲಿ ಇದ್ದಾರೆ ಎಂಬುದನ್ನು ಮುಗ್ದ ಜನರು ಅರ್ಥ ಮಾಡಿಕೊಳ್ಳಬೇಕು. ಅಂತವರಿಂದ ಎಚ್ಚರವಹಿಸದಿದ್ದರೆ ದುಡ್ಡು ಕಳೆದುಕೊಳ್ಳುವುದು ಖಚಿತ.
ಅರೆಬರೆ ಮಾಂತ್ರಿಕ ವಿದ್ಯೆಯನ್ನು ಕಲಿತು ಜ್ಯೋತಿಷಿಗಳ ವೇಷ ತೊಟ್ಟ ಕಮರ್ಷಿಯಲ್ ಮಾಂತ್ರಿಕರಿಂದ ಬಾನಾಮತಿ ಶಕ್ತಿ ಪ್ರಯೋಗ ಮಾಡಲು ಸಾಧ್ಯವಾಗದ ಮಾತು. ಮಂತ್ರ ಶಕ್ತಿಯ ಮಹಾ ಪ್ರಯೋಗ ವಿದ್ಯೆಗಳಲ್ಲಿ ಬಾನಾಮತಿ ಎಂಬುದು ಒಂದು ಪೈಶಾಚಿಕ ವಿದ್ಯೆ. ಆದ್ದರಿಂದ ಇದರ ಸಾಧನೆಗೆ ಅತ್ಯಂತ ಕ್ಲಿಷ್ಟಕರವಾದ ಮನೋದೈಹಿಕ ಸಿದ್ದಿ ಇರಬೇಕಾಗುತ್ತದೆ. ಭಾನುವಾರ ಬೆರೆತ ಅಮವಾಸ್ಯೆಯ ದಿನ ಸಾಧಕನು ಹರಿಯುವ ನೀರಿನ ನಡುವೆ ನಿಂತು ಏಕಾಗ್ರತೆಯಿಂದ ಭಾನಾಮತಿ ಮಂತ್ರವನ್ನು ಪಠಿಸಿ ಕಂಠಪಾಠ ಮಾಡಿಕೊಳ್ಳಬೇಕು ನಂತರ ಮಧ್ಯರಾತ್ರಿ ಬಾಣಂತಿ ಸಮಾಧಿ ಮುಂದೆ ಯಾವುದೇ ಅಪಾಯ ಜರುಗದ ಹಾಗೆ ಗುರುವಿನ ಜೊತೆಗೆ ಅಷ್ಟದಿಗ್ಬಂಧನದ ನಡುವೆ ಪದ್ಮಾಸನ ಹಾಕಿಕೊಂಡು ಕ್ರಮಬದ್ಧವಾಗಿ ಬಾನಾಮತಿ ಮಂತ್ರವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ನಿಖರವಾಗಿ ಪಠಿಸುತ್ತಾ ವಿಶೇಷವಾದ ಪೂಜಾ ವಸ್ತುಗಳಿಂದ ಒಂದು ಮಂಡಲದ ವರೆಗೆ (ಒಂದು ಮಂಡಲ ಅಂದ್ರೆ 40 ದಿನ) ಪೂಜೆ ನಡೆಯಬೇಕು. ಆಗ ಪೈಶಾಚಕ ನಿರುಪದ್ರವಿ ಬಾನಾಮತಿ ಶಕ್ತಿಯು ಸಾಧಕನಿಗೆ ಸಿದ್ದಿ ಆಗುತ್ತದೆ. ಸಿದ್ಧಿ ಆದ ಬಾನಾಮತಿ ಶಕ್ತಿಯನ್ನು ವಾಮ ಸಾಧಕನು ಎಂತಹ ಅಸಾಧ್ಯವಾದ ಕೆಲಸವನ್ನು ಕೂಡಾ ಪ್ರೇತಾತ್ಮಗಳ ಮೂಲಕ ಸಾಧ್ಯವಾಗಿಸಿ ಬಿಡಬಲ್ಲ. ಕಾಲೇಜುಗಳಲ್ಲಿ ಡಬಲ್ ಡಿಗ್ರಿ ಸಂಪಾದನೆ ಮಾಡಿದಷ್ಟು ಸುಲಭವಾಗಿ ಕ್ಷುದ್ರ ವಿದ್ಯೆಗಳನ್ನು ಸಂಪಾದಿಸುವುದು ಸುಲಭವಲ್ಲ. ಕ್ಷುದ್ರ ಶಕ್ತಿಗಳನ್ನು ಸಿದ್ದಿ ಮಾಡಿಕೊಳ್ಳಲು ವಿಶೇಷವಾದ ಮನೋದೈಹಿಕ ಶಕ್ತಿ ಬೇಕಾಗುತ್ತದೆ. ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಇಟ್ಟುಕೊಂಡು ನಡು ರಾತ್ರಿ ಸ್ಮಶಾನದಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತು ಚಳಿ, ಮಳೆ, ಗಾಳಿ ಲೆಕ್ಕಿಸದೆ ಏಕಾಗ್ರತೆಯಿಂದ ಮಂತ್ರಗಳನ್ನು ಕ್ರಮಬದ್ಧವಾಗಿ ಮಂಡಲ ಪೂಜೆ ಮುಗಿಯುವ ತನಕ ಹ್ರಸ್ವಸ್ವರ ಹಾಗೂ ದೀರ್ಘಸ್ವರದಲ್ಲಿ ಸ್ವಲ್ಪವೂ ವ್ಯತ್ಯಾಸವಾಗದ ರೀತಿ ಪಠನ ಮಾಡಿದಾಗ ಕ್ಷುದ್ರ ಶಕ್ತಿ ಸಾಧಕನಿಗೆ ಒಲೆದು ಬಿಡುತ್ತದೆ. ಕೆಲವು ಕ್ಷುದ್ರ ಶಕ್ತಿಗಳ ಸಾಧನೆಗೆ ಮಂಡಲ ಪೂಜೆ ಮುಗಿಯುವ ವರೆಗೆ ನಿದ್ರೆ, ನೀರಡಿಕೆ, ಹಸಿವು, ಮಲ ಮೂತ್ರ ವಿಸರ್ಜನೆಗೂ ಅವಕಾಶ ಇರುವುದಿಲ್ಲ. ಇದರಿಂದಾಗಿ ಕ್ಷುದ್ರ ಸಾಧಕರು ಕೆಲವು ವನಸ್ಪತಿಗಳನ್ನು ವಿಶೇಷ ಗಳಿಗೆಯಲ್ಲಿ ಶಾಸ್ತ್ರೋಕ್ತವಾಗಿ ತಂದು ಆ ವನಸ್ಪತಿಗಳನ್ನು ತಿಂದು ಕ್ಷುದ್ರ ಶಕ್ತಿಗಳ ಸಾಧನೆಗಳಿಗೆಂದು ಮಂಡಲಪೂಜೆ ಮುಗಿಯುವವರೆಗೂ ಕುಳಿತುಬಿಡುತ್ತಾರೆ. ಇಂತಹ ವಿಶೇಷ ವನಸ್ಪತಿಗಳು ಸಾಧಕನಿಗೆ ನಿದ್ರೆ, ನೀರಡಿಕೆ, ಹಸಿವು, ಮಲ ಮೂತ್ರ ವಿಸರ್ಜನೆಗಳನ್ನು ತಿಂಗಳುಗಟ್ಟಲೆ ನಿಭಾಯಿಸಬಲ್ಲ ಶಕ್ತಿಯನ್ನು ಕೊಟ್ಟು ಬಿಡುತ್ತವೆ. ಇಂತಹ ಕ್ಲಿಷ್ಟಕರ ಸಾಧನೆಗಳ ಮೂಲಕ ಒಲೆಯುವ ಕ್ಷುದ್ರ ಶಕ್ತಿಗಳಲ್ಲಿ ಬಾನಾಮತಿಯು ಒಂದು.

ಕ್ಷುದ್ರ ಶಕ್ತಿಯ ಸಾಧನೆಯ ಸಂದರ್ಭದಲ್ಲಿ ಒಬ್ಬ ಸಾಧಕ ಕ್ಷುದ್ರ ಶಕ್ತಿ ಸಾಧನೆಗೆ ಕುಳಿತುಕೊಳ್ಳುವ ಮೊದಲು ಆತನ ಪೂಜಾ ಸಿದ್ಧತೆಯ ಕ್ರಮವನ್ನು ನೋಡಿದರೆ ಸಾಮಾನ್ಯ ಮನುಷ್ಯನೊಬ್ಬನಿಗೆ ವಿಸ್ಮಯ ಅನಿಸಿಬಿಡುತ್ತದೆ. ಕಲ್ಪನೆಯನ್ನು ಕೂಡ ಮಾಡಲಾಗದಂತಹ ಹಾಗೂ ನಾಗರಿಕರಾದ ನಾವು ಯಾವತ್ತೂ ಹೆಸರು ಕೇಳಿರದಂತಹ ವಸ್ತುಗಳನ್ನು ಸಾಧಕ ಶಾಸ್ತ್ರೋಕ್ತವಾಗಿ ಸ್ವತಃ ತಂದು ಸಂಗ್ರಹಿಸುತ್ತಾನೆ. ಎಣಿಸಲಾಗದಷ್ಟು ಪುಟ್ಟ ಪುಟ್ಟ ಮಡಿಕೆಗಳು, ಎಳ್ಳು, ಕುಂಕುಮ, ಅಸಂಖ್ಯಾತ ಅರಸಿನ ಮತ್ತು ರಕ್ತ ವರ್ಣದ ದಾರಗಳು, ಕಾಗೆ ಬಂಗಾರ, ಕಾಡ ಪಾಪು ಎಂಬ ಪ್ರಾಣಿಯ ಕಿತ್ತಿರುವ ಕಣ್ಣುಗಳು, ಲಪ್ಪ, ಗಿಡದ ಬೇರುಗಳು, ಪೇಪರಿಗಿಂತಲೂ ತೆಳುವಾದ ತಾಮ್ರದ ತಗಡುಗಳು, ವಿಚಿತ್ರ ವಾಸನೆಯ ಪುಡಿಗಳು, ಮೇಣಬತ್ತಿಗಳು, ಬಳೆಗಳು, ಪ್ರಾಣಿಗಳ ಅಂಗಾಂಗಗಳು, ಸೂಜಿ ಮತ್ತು ಡಬ್ಬನಗಳು, ಕೈ ಬೆರಳು, ಮೂಳೆಗಳು, ಹಳೆಯ ಕಾಲದ ತಲೆಬುರುಡೆ ಮುಂತಾದ ವಿಚಿತ್ರ ವಸ್ತುಗಳು ಕ್ಷುದ್ರ ಶಕ್ತಿಯ ಸಾಧನೆಯ ಸಂದರ್ಭದಲ್ಲಿ ಕಾಣಸಿಗುತ್ತವೆ. ಸಾಧನೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಅಡತಡೆಗಳು ಅಥವಾ ದೋಷಗಳು ಆಗದಿರಲೆಂದು ಸಾಧಕ ಈ ಎಲ್ಲ ವಸ್ತುಗಳನ್ನು ನೂರು ಬಾರಿ ಮರುಪರಿಶೀಲನೆ ಮಾಡಿ ಅಳೆದು ತೂಗಿದ ಮೇಲೆ ಕ್ಷುದ್ರ ಶಕ್ತಿಯ ಸಾಧನೆಗೆ ಕುಳಿತು ಬಿಡುತ್ತಾನೆ. ಸಾಧನೆಯಲ್ಲಿ ಏನಾದ್ರೂ ಒಂದೇ ಒಂದು ಸಣ್ಣ ದೋಷ ಆದರೂ ಸಾಧಕನ ಸಾವು ಖಚಿತ. ಸಾಧಕ ಸಾಧನೆಯನ್ನು ಯಶಸ್ವಿಯಾಗಿ ಮುಗಿಸಿ ಕ್ಷುದ್ರ ಶಕ್ತಿಯ ಮೇಲೆ ಅಂತಿಮವಾಗಿ ಜಯ ಸದಿಸಿಬಿಟ್ಟರೆ ಆಗ ವಿಜ್ಞಾನಕ್ಕೆ ಸಾವು ನಿಶ್ಚಿತ. ಏಕೆಂದ್ರೆ ವಿಜ್ಞಾನ ಮತ್ತು ಮಾಂತ್ರಿಕತೆ ಇವೆರಡಕ್ಕೂ ವಸ್ತು ಮತ್ತು ಚೈತನ್ಯವೇ (Matter and energy) ತಳಹದಿ ಆಗಿರುತ್ತವೆ. ವಿಜ್ಞಾನವು ವಸ್ತುವನ್ನು ಬಳಿಸಿ ಚೈತನ್ಯವನ್ನು ಅರಿತರೆ ಮಾಂತ್ರಿಕತೆಯು ಚೈತನ್ಯದ ಮುಖಾಂತರ ವಸ್ತುವನ್ನು ಗ್ರಹಿಸುತ್ತದೆ. ಹೀಗಾಗಿ ಬಾನಾಮತಿ ಶಕ್ತಿಯ ಪವಾಡವನ್ನು ಬಯಲು ಮಾಡಲು ವಿಜ್ಞಾನಕ್ಕೆ ಸಾಧ್ಯವಾಗುವುದಿಲ್ಲ.
ವಿಜ್ಞಾನದ ಮೂಲಕ ಡೋಂಗಿ ಬಾಬಾಗಳು, ಡೋಂಗಿ ಮಂತ್ರವಾದಿಗಳು, ಹಾಗೂ ನಕಲಿ ತಾಂತ್ರಿಕರು ಸೃಷ್ಟಿಸುವ ಕಣ್ಣಾ ಮುಚ್ಚಾಲೆ ಆಟದಂತಿರುವ ಪವಾಡಗಳನ್ನು ಬಯಲು ಮಾಡಲು ಸಾಧ್ಯವಾಗುತ್ತದೆ. ಕಣ್ಣಾ ಮುಚ್ಚಾಲೆ ಆಟದಂತಿರುವ ಸಂಖ್ಯಾತ ಪವಾಡಗಳನ್ನು ಬಯಲು ಮಾಡಿದ ಕೀರ್ತಿ ಹುಲಿಕಲ್ ನಟರಾಜ್ ಅವರಿಗೆ ಸಲ್ಲುತ್ತದೆ. ಡೋಂಗಿ ಬಾಬಾಗಳು ದುಡ್ಡಿಗಾಗಿ ಮುಗ್ದ ಜನರನ್ನು ಹೇಗೆ ವೆಂಚನೆ ಮಾಡುತ್ತಾರೆ ಎನ್ನುವ ಕುರಿತು ಹುಲಿಕಲ್ ನಟರಾಜ್ ಅವರು ಪವಾಡು ಬಯಲು ಅನ್ನುವ ಕಾರ್ಯಕ್ರಮ ನಡೆಯಿಸಿ ಡೋಂಗಿ ಬಾಬಾಗಳ ಕೈಚಳಕಗಳನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಿ ಜನರಲ್ಲಿ ಜಾಗೃತಯನ್ನು ಮೂಡಿಸುತ್ತಾರೆ. ಈ ನಕಲಿ ಬಾಬಾಗಳು, ಮಂತ್ರವಾದಿಗಳು ಹೆಚ್ಚಾದಷ್ಟೂ ಹುಲಿಕಲ್ ನಟರಾಜ್ ಅವರ ಹಾಗೆ ಪವಾಡಗಳನ್ನು ಬಯಲು ಮಾಡುವವರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾಜಕ್ಕೆ ಬೇಕಾಗುತ್ತದೆ. ಇಲ್ಲದಿದ್ದರೆ ಇಂತಹ ನಕಲಿ ಮಂತ್ರವಾದಿಗಳು, ಬಾಬಾಗಳು ಮುಗ್ದ ಜನರ ತಲೆಯಲ್ಲಿ ಹುಳ ಬಿಟ್ಟು ವೆಂಚಿಸಿ ದುಡ್ಡು ಕಿತ್ತುಕೊಳ್ಳುತ್ತರೆ. ಇಂಥವರಿಂದ ಒಂದು ಕಡೆ ಸಮಾಜಕ್ಕೆ ಮೋಸ ಆದರೆ ಮತ್ತೊಂದು ಕಡೆ ಪ್ರಾಚೀನ ಕಾಲದ ರಹಸ್ಯ ವಿದ್ಯೆಗಳನ್ನು ಜನರು ನಂಬದ ಸ್ಥಿತಿ ಕೂಡಾ ಉಂಟಾಗಿದೆ ಹಾಗೂ ಪ್ರಪಂಚ ಆಧುನಿಕತೆ ಕಡೆಗೆ ವಾಲಿದ ಕಾರಣಕ್ಕಾಗಿಯೂ ಯಂತ್ರ, ತಂತ್ರ, ವಶೀಕರಣ, ಮಾಟ, ಮಂತ್ರದಂತಹ ಎಲ್ಲ ಪ್ರಾಚೀನ ವಿದ್ಯೆಗಳು ಕ್ಷೀಣಿಸುತ್ತಾ ಕ್ಷೀಣಿಸುತ್ತಾ ಹೆಚ್ಚುಕಡಿಮೆ ನಶಿಸಿಹೋಗಿವೆ. ಈಗ ಏನಿದ್ರೂ ಡೋಂಗಿ ಬಾಬಾಗಳ, ಡೋಂಗಿ ಮಾಂತ್ರಿಕರ ಕಾಲ. ಆದರೂ ಇಂತಹ ಡೊಂಗಿಗಳ ನಡುವೆ ಲಕ್ಷಕ್ಕೆ ಒಬ್ಬ ಅನ್ನೋ ಹಾಗೆ ಕ್ಷುದ್ರ ಶಕ್ತಿಗಳ ಸಾಧಕರು ನಮ್ಮ ಕರ್ನಾಟಕದ ಬಿಳಿಗಿರಿರಂಗನ ಬೆಟ್ಟ ಹಾಗೂ ಮಲೆಮಾದೇಶ್ವರ ಕಾಡುಗಳಲ್ಲಿ ಇದ್ದಾರೆ.
ನಿಜವಾದ ಕ್ಷುದ್ರ ಸಾಧಕನನ್ನು ಹುಡುಕಿ ಆತನನ್ನು ಆಶ್ರಯಿಸಿ ಆತನ ಕೈಕಾಲು ಹಿಡಿದು ಮನ ಒಲಿಸಬೇಕು. ಜೀವನದಲ್ಲೇ ಯಾವತ್ತೂ ಹೆಸರುಗಳನ್ನು ಕೇಳಿರದಂತಹ ಹಾಗೂ ನೋಡಿರದಂತಹ ವಸ್ತುಗಳನ್ನು ತರಲು ಕ್ಷುದ್ರ ಸಾಧಕ ಸೂಚಿಸುತ್ತಾನೆ. ಅವುಗಳೆಲ್ಲವೂಗಳನ್ನು ಹುಡುಕಿ ತಂದು ಕೊಟ್ಟ ಮೇಲೆ ಕಟ್ಟಕಡೆಗೆ ಕ್ಷುದ್ರ ಸಾಧಕ ಕೇಳಿದಷ್ಟು ದುಡ್ಡು ಕೊಟ್ಟು ನಿಮಗೆ ಆಗದವರ ಮೇಲೆ ಅಥವಾ ನಿಮ್ಮ ಶತ್ರುಗಳ ಮೇಲೆ ಬಾನಾಮತಿ ಶಕ್ತಿಯ ಪ್ರಯೋಗ ಮಾಡಿಸಿದರೆ ಆಗ ವಿಜ್ಞಾನಕ್ಕೆ ಎಟುಕದ ಅಸಲಿ ಪವಾಡಗಳ ಸುರಿಮಳೆ ಆರಂಭವಾಗುತ್ತವೆ ಎಂದು ಮಲೆಮಹದೇಶ್ವರ ಬೆಟ್ಟದಲ್ಲಿದ್ದ ಬಾಬಾ ಒಬ್ಬ ಹೇಳುತ್ತಿದ್ದ. ಬಾನಾಮತಿ ಪ್ರಯೋಗಕ್ಕೆ ಒಳಪಟ್ಟವರ ಮನೆಯಲ್ಲಿ ವಿಚಿತ್ರ ಹಾಗೂ ನಂಬಲು ಸಾಧ್ಯವಾಗದ ಘಟನೆಗಳು ಆರಂಭವಾಗಿಬಿಡುತ್ತವೆ. ಬಾನಾಮತಿ ಪ್ರಯೋಗಕ್ಕೆ ಒಳಗಾದವರು ಪಡಬಾರದ ಕಷ್ಟ ನಷ್ಟ ನೋವುಗಳನ್ನು ಅನುಭವಿಸಬೇಕಾಗುತ್ತದೆ ಅಂತೆ. ಬಾನಾಮತಿ ಪ್ರಭಾವಕ್ಕೆ ಒಳಪಟ್ಟವರ ಮನೆಗಳಲ್ಲಿನ ಹಸುಗಳ ಕೆಚ್ಚಲು ನಿಂತು ಹೋಗಿ ಕೆಚ್ಚಲಲ್ಲಿ ಹಾಲಿನ ಬದಲು ರಕ್ತ ಬರುತ್ತದೆ. ಮನೆಯ ಮೇಲೆ ಕಲ್ಲುಗಳು ಬಿದ್ದ ಹಾಗೆ ಸಪ್ಪಳು ಆಗುತ್ತದೆ. ಹತ್ತು ಜನಕ್ಕೆ ಮಾಡಿದ ಅಡಿಗೆಯನ್ನು ಒಬ್ಬರೇ ತಿಂದು ಮುಗಿಸುತ್ತಾರೆ. ರಾತ್ರಿ ಮಲಗಿದಾಗ ಭಯಾನಕ ಕನಸುಗಳು ಬೀಳುತ್ತವೆ. ರಾತ್ರಿಯ ಸಮಯದಲ್ಲಿ ಮನೆಯ ಬಾಗಿಲವನ್ನು ಬಡಿದ ಸದ್ದು ಕೇಳುತ್ತದೆ. ಬಾಗಿಲು ತೆರೆದು ನೋಡಿದರೆ ಯಾರು ಇರುವುದಿಲ್ಲ. ಬಾಗಿಲು ಮುಚ್ಚಿದ ಮೇಲೆ ಮತ್ತೆ ಬಾಗಿಲು ಬಡಿಯುವ ಸದ್ದು ಆರಂಭ ಆಗಿಬಿಡುತ್ತದೆ. ಬಾನಾಮತಿ ಪ್ರಯೋಗಕ್ಕೆ ಒಳಗಾದವರ ಕೈಕಾಲು ಮುಖದ ಮೇಲೆ ಚೂರಿಯಿಂದ ಇರಿದ ಹಾಗೆ ನೋವಿನ ಗುರುತುಗಳು ಮೂಡುತ್ತವೆ ಅಂತೆ. ಮನೆಯಲ್ಲಿರುವ ಬಟ್ಟೆ ಬರೆಗಳು ಮತ್ತು ನೋಟಿನ ಕಂತೆಗಳು ಕಣ್ಮರೆ ಅಗ್ತೇವೆ ಅಥವಾ ಅವುಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗುತ್ತವೆ. ಊಟದಲ್ಲಿ ಕಲ್ಲು ಮತ್ತು ಮಣ್ಣಿನ ಅಂಶಗಳು ಬಂದು ಬಿಡುತ್ತವೆ. ಅಡುಗೆ ಮನೆಯಲ್ಲಿ ಯಾರೂ ಊಟಾ ಮಾಡಿ ಕೈ ತೊಳೆದ ಹಾಗೆ ಶಬ್ದ ಕೇಳಿ ಬರುತ್ತದೆ. ಅಡುಗೆ ಮನೆಗೆ ಹೋಗಿ ನೋಡಿದರೆ ಅಲ್ಲಿ ಯಾರೂ ಇರುವುದಿಲ್ಲ. ಅಡುಗೆ ಮನೆಯಲ್ಲಿ ಮಾಡಿಟ್ಟ ಅಡುಗೆ ಹೋಗಿ ನೋಡುವಷ್ಟರಲ್ಲಿ ಖಾಲಿಯಾಗಿ ಬಿಟ್ಟಿರುತ್ತದೆ. ಬಾನಾಮತಿ ಪ್ರಯೋಗಕ್ಕೆ ಒಳಗಾದವರು ಮುಂತಾದ ವಿಚಿತ್ರ ಘಟನೆಗಳಿಂದ ಅನೇಕ ಕಷ್ಟ ನಷ್ಟ ನೋವುಗಳನ್ನು ಅನುಭವಿಸಬೇಕಾಗುತ್ತದೆ ಅಂತೆ.
ಓದುಗರಿಗೆ ಇಲ್ಲಿ ಒಂದು ಸಂಗತಿಯನ್ನು ಸ್ಪಷ್ಟವಾಗಿ ಹೇಳಲು ಇಚ್ಚಿಸುವುದೇನೆಂದರೆ ಕೇವಲ ಬಾನಾಮತಿ ಪ್ರಯೋಗಕ್ಕೆ ಒಳಗಾದವರು ಮಾತ್ರ ಕಷ್ಟ-ನಷ್ಟ ನೋವುಗಳನ್ನು ಅನುಭವಿಸುವುದಿಲ್ಲ ಬಾನಾಮತಿ ಪ್ರಯೋಗವನ್ನು ಯಾವನು ಮಾಡಿಸಿರುತ್ತನೋ ಆತನನ್ನು ಕೂಡಾ ಬಾನಾಮತಿ ಶಕ್ತಿ ಬಿಡುವುದಿಲ್ಲ. ಪರಸ್ಪರ ಮಾಡಿಸಿದವನು ಹಾಗೂ ಬಾನಾಮತಿ ಪ್ರಯೋಗಕ್ಕೆ ಒಳಗಾದವನು ಇಬ್ಬರಿಗೂ ಬರಬಾರದ ಕಷ್ಟ ನಷ್ಟ ನೋವುಗಳು ಬಂದು ಒದಗುತ್ತವೆ. ಅಷ್ಟೇ ಅಲ್ಲ ಕ್ಷುದ್ರ ಸಾಧಕನು ತನ್ನ ಸುತ್ತಲೂ ಎಸ್ಟೇ ಬಲಿಷ್ಟ ದಿಗ್ಬಂದನ ಮಾಡಿಕೊಂಡರೂ ಕೂಡಾ ತನ್ನ ಜೀವನದ ಅಂತಿಮ ಕ್ಷಣಗಳಲ್ಲಿ ಮಾಡಿದ ಕರ್ಮಕ್ಕೆ ಅನುಗುಣವಾಗಿ ಭಯಾನಕವಾಗಿ ನರಳಬೇಕಾಗುತ್ತದೆ. ದಶಕಗಳ ಹಿಂದೆ ಕೊಳ್ಳೇಗಾಲದಲ್ಲಿ ಕ್ಷುದ್ರ ಶಕ್ತಿಗಳನ್ನು ಸಾಧನೆ ಮಾಡಿದ ಪ್ರಚಂಡ ಮಾಂತ್ರಿಕರು ಇದ್ದರು. ದಶಕಗಳ ಹಿಂದೆ ಇದ್ದ ಆ ಮಾಂತ್ರಿಕರ ವಂಶಸ್ಥರನ್ನು ಇವತ್ತಿನ ದಿನ ಮುಂದೆ ಕೂಡ್ರಿಸಿಕೊಂಡು ಮಾಂತ್ರಿಕತೆಯನ್ನು ನೀವು ವಂಶ ಪರಂಪರೆಯಿಂದ ಮುಂದುವರಿಸಿಕೊಂಡು ಬರಬೇಕಾಗಿತ್ತು ಎಂದು ಕೇಳಿದರೆ, ಮಾಂತ್ರಿಕ ಕ್ಷೇತ್ರದ ಸಹವಾಸವೇ ಬೇಡ ಅದರಿಂದಾಗಿ ನಮ್ಮ ಮನೆತನಕ್ಕೆ ಬರಬಾರದ ಕಷ್ಟಗಳು ಬಂದಿವೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕ್ಷುದ್ರ ಶಕ್ತಿಗಳನ್ನು ಆಶ್ರಯಿಸಿ ದುರ್ವಿನಿಯೋಗ ಮಾಡಿಕೊಂಡರೆ ಅವರು ಯಾರೇ ಆಗಲಿರಲಿ, ಎಸ್ಟೇ ಬಲಿಷ್ಟರಾಗಿರಲಿ ಕಟ್ಟಕಡೆಗೆ ಅವನತಿ ಹೊಂದಬೇಕಾಗುತ್ತದೆ. ಏಕೆ ಅಂದ್ರೆ ಕ್ಷುದ್ರ ಶಕ್ತಿಗಳ ಆರಾಧನೆಯೂ ಕೂಡ ಒಂದು ಬಗೆಯ ಆಧ್ಯಾತ್ಮ! ಇದನ್ನು ದುರ್ವಿನಿಯೋಗ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆಧ್ಯಾತ್ಮವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಬಹುದು ಒಂದು ಧನಾತ್ಮಕ ಆಧ್ಯಾತ್ಮ ಇನ್ನೊಂದು ಋಣಾತ್ಮಕ ಆಧ್ಯಾತ್ಮ. ಧನಾತ್ಮಕ ಆಧ್ಯಾತ್ಮಕ್ಕೆ ಅನುಗುಣವಾಗಿ ನಾವು ದೇವಸ್ಥಾನಗಳಿಗೆ ಹೋಗಿ ದೀಪ ಹಾಗೂ ಅಗರಬತ್ತಿ ಹಚ್ಚಿ, ಕರ್ಪೂರ ಬೆಳಗಿಸಿ, ತೆಂಗಿನಕಾಯಿ ಒಡೆದು, ಅರ್ಚನೆ ಹಾಗೂ ಅಭಿಷೇಕ ಮಾಡುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿ ದೈವಿ ಶಕ್ತಿಯ ಆರಾಧನೆ ಮಾಡುವಂತಹ ಪರಂಪರೆಯನ್ನು ಹೇಗೆ ಬೆಳೆಸಿಕೊಂಡು ಬಂದಿವೋ ಹಾಗೆಯೇ ಇದಕ್ಕೆ ತದ್ವಿರುದ್ಧವಾಗಿ ಎನ್ನುವಂತೆ ಮತ್ತೊಂದು ಕಡೆ ಋಣಾತ್ಮಕ ಆಧ್ಯಾತ್ಮ ಬೆಳೆದು ನಿಂತಿದೆ. ಸ್ಮಶಾನ ಭೂಮಿಯಲ್ಲಿ ಧ್ಯಾನ, ಕಪಾಲ ಪೂಜೆ, ವಶೀಕರಣ, ರಕ್ತೋದರ, ವೂಡೂ ಡಾಲ್, ಶವ ಬೋಜನ, ಶವ ಮೈಥುನ, ಶವ ಪೂಜೆ, ಕಪಾಲ ಬೋಜನ, ಹೀಗೆ ಮುಂತಾದ ಕ್ಷುದ್ರ ಶಕ್ತಿಗಳನ್ನು ಪೂಜಿಸುವ ಪರಂಪರೆಯ ಅನಾದಿಕಾಲದಿಂದ ಬೆಳೆದು ಬಂದಿದೆ. ಇಂತಹ ಕ್ಷುದ್ರ ಶಕ್ತಿಗಳ ಆರಾಧನೆಯಿಂದ ಅತ್ಯಂತ ಕ್ಷಿಪ್ರವಾಗಿ ಫಲಿತಾಂಶ ಸಿಗುತ್ತದೆ ಎಂಬ ಕಾರಣಕ್ಕಾಗಿ ಪ್ರಾಚೀನ ಕಾಲದಲ್ಲಿ ದುಷ್ಟರಿಂದ, ಕಾಡು ಪ್ರಾಣಿಗಳಿಂದ, ವಿಷಜಂತುಗಳಿಂದ ಆತ್ಮ ರಕ್ಷಣೆ ಪಡೆಯಲು ಹಾಗೂ ಅನೇಕ ಪ್ಯಾರಾನಾರ್ಮಲ್ ಸಮಸ್ಯೆಗಳ ಪರಿಹಾರಕ್ಕಾಗಿ ಇಂತಹ ಕ್ಷುದ್ರ ಶಕ್ತಿಗಳನ್ನು ಆಶ್ರಯಿಸುತ್ತಿದ್ದರು.
ಇಂತಹ ಕ್ಷುದ್ರ ಶಕ್ತಿಗಳನ್ನು ದುರ್ವಿನಿಯೋಗ ಮಾಡಿಕೊಳ್ಳಬೇಕೊ ಅಥವಾ ಸದ್ವಿನಿಯೋಗ ಮಾಡಿಕೊಳ್ಳಬೇಕೊ ಎಂಬುದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟದ್ದು. ಕಳ್ಳನು ರಾತ್ರಿ ಮನೆಯನ್ನು ಪ್ರವೇಶಿಸಿದಾಗ ಮನೆಯಲ್ಲಿರುವ ಆಯುಧದಿಂದ ಬೆದರಿಸಿ ಓಡಿಸಿದರೆ ಸದ್ವಿನಿಯೋಗವಾಗುತ್ತದೆ ಹಾಗೂ ಮನೆಗೆ ಅತಿಥಿಗಳು ಬಂದಾಗ ಅವರನ್ನು ಅದೇ ಆಯುಧದಿಂದ ಇರಿದು ಗಾಯಗೊಳಿಸಿದರೆ ದುರ್ವಿನಿಯೋಗವಾಗುತ್ತದೆ. ಕಲಿಯುಗದಲ್ಲಿ ಜನರು ದುರ್ವಿನಿಯೋಗ ಮಾಡಿಕೊಳ್ಳುವುದೇ ಹೆಚ್ಚು. ಬಹುಶಃ ಅದೇ ಕಾರಣಕ್ಕೆ ಕ್ಷುದ್ರ ಶಕ್ತಿಗಳ ವಿದ್ಯೆ ಕ್ಷೀಣಿಸುತ್ತಾ ಕ್ಷೀಣಿಸುತ್ತಾ ಇವತ್ತು ಅವನತಿ ಹಂತವನ್ನು ತಲುಪಿರಬಹುದು.