ಮನೆಮನೆಯಲ್ಲಿ ಮಧುಮೇಹ. ಭಾರತವನ್ನು ಜಗತ್ತಿನ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ ಎಂಬುದು ನಿಜವಾಗಲೂ ಅತ್ಯಂತ ಆಘಾತಕಾರಿ ಸಂಗತಿ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮಧುಮೇಹದ (Indian council of medical research) ಕುರಿತು ಪೂರ್ತಿಯಾಗಿ ಒಂದು ಅಧ್ಯಯನ ಮಾಡಿ ಭಾರತದಲ್ಲಿ ಮಧುಮೇಹದಿಂದ ಬಳಲುವವರ ಅಂಕಿ ಅಂಶಗಳನ್ನು ಪ್ರಕಟ ಮಾಡಿದೆ. ಭಾರತದಲ್ಲಿ 10 ಕೋಟಿಗಿಂತಲೂ ಹೆಚ್ಚಿನ ಜನ ಇವತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಇನ್ನು 13.6 ಕೋಟಿಯಷ್ಟು ಜನರು ಪೂರ್ವ ಮಧುಮೇಹದಿಂದ (Prediabetes) ಬಳಲುತ್ತಿದ್ದಾರೆ. ಇಡೀ ದೇಶಾದ್ಯಂತ ಅತ್ಯಂತ ವ್ಯಾಪಕವಾಗಿ ಮಧುಮೇಹವು ಅಥವಾ ಸಕ್ಕರೆ ಕಾಯಿಲೆ ಹಬ್ಬುತ್ತಿದೆ. ಪೂರ್ವ ಮಧುಮೇಹದಿಂದ ಬಳಲುವವರಿಗೆ ದೇಹದಲ್ಲಿ ಮೇದೋಜೀರಕ ಗ್ರಂಥಿಯು (pancreas) ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆ ಮಾಡುವುದಿಲ್ಲ. ಹೀಗಾಗಿ ಪೂರ್ವ ಮಧುಮೇಹದಿಂದ ಬಳಲುವವರಿಗೆ ರಕ್ತದಲ್ಲಿ ಸಕ್ಕರೆ ಅಂಶ ತುಂಬಾ ಹೆಚ್ಚು ಇರುತ್ತದೆ. ಭಾರತದಲ್ಲಿ ಇರುವ ಈ 13.6 ಕೋಟಿ ಪೂರ್ವ ಮಧುಮೇಹದಿಂದ ಬಳಲುತ್ತಿರುವ ಜನರ ಮೇದೋಜೀರಕ ಗ್ರಂಥಿಯು (pancreas) ಇನ್ಸುಲಿನ್ ಉತ್ಪಾದನೆ ಮಾಡುವ ಕೆಲಸವನ್ನು ಮುಂದಿನ ಕೆಲವೇ ವರ್ಷಗಳಲ್ಲಿ ನಿಲ್ಲಿಸುತ್ತದೆ ಹಾಗೂ ಈಗ ಇರುವ ಪೂರ್ವ ಮಧುಮೇಹ ರೋಗಿಗಳು ಮಧುಮೇಹ ರೋಗದಿಂದ ಬಳಲತ್ತಿರುವವರು ಆಗಿರುವರು. ಹೀಗಾಗಿ ಈ ಪೂರ್ವ ಮಧುಮೇಹ ರೋಗಿಗಳು ಮುಂಜಾಗ್ರತೆ ವಹಿಸಿದರೆ ಮುಂಬರುವ ಸಕ್ಕರೆ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈಗ ಪ್ರಸ್ತುತವಾಗಿ ಒಟ್ಟು 23 ಕೋಟಿಗಿಂತಲೂ ಹೆಚ್ಚಿನ ಜನ ಮಧುಮೇಹಕ್ಕೆ ಸಂಭಂದಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂಥಹ ಆಘಾತಕಾರಿ ಸಂಗತಿಯ ಕುರಿತು 2023 ಜನವರಿ ತಿಂಗಳಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸಮೀಕ್ಷೆ ನಡೆಸಿದೆ ಹಾಗೂ ಇದರ ಕುರಿತು ಲ್ಯಾನ್ಸೆಟ್ ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರ ಪತ್ರಿಕೆಯಲ್ಲಿ ಪ್ರಕಟ ಕೂಡ ಆಗಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. ಇಡೀ ದೇಶಾದ್ಯಂತ ಸಕ್ಕರೆ ಕಾಯಿಲೆ ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರಗಳು ಬದ್ಧವಾಗಿರಬೇಕು ಎಂಬುದನ್ನು ಸಾರ್ವಜನಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ. ಮುಖ್ಯವಾಗಿ ಇಡೀ ದೇಶದ ಜನತೆಗೆ ಮಧುಮೇಹದ ಕುರಿತು ಸ್ವಯಂ ಅರಿವು ಮೂಡಬೇಕು ಹಾಗೂ ಸರಿಯಾದ ಚಿಕಿತ್ಸೆ, ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮುಖ ಮಾಡಿಕೊಳ್ಳಬಹುದು ಹಾಗೂ ಮಧುಮೇಹ ಹರಡದಂತೆ ತಡೆಯಲುಬಹುದು.

ನಮ್ಮ ನಮ್ಮ ಮನೆಗಳಲ್ಲಿರುವ ವಿದ್ಯುತ್ ಶಕ್ತಿಯ ವೋಲ್ಟೇಜ್ ಹೆಚ್ಚುವಾಗಬಾರದು ಅಥವಾ ಕಡಿಮೆಯೂ ಆಗಬಾರದು. ಹಾಯ್ ಹೋಲ್ಟೇಜ್ ವಿದ್ಯುತ್ ಶಕ್ತಿಯಿಂದ ಉಪಕರಣಗಳು ದ್ವಂಸಗೊಳ್ಳುತ್ತವೆ ಇನ್ನೂ ಲೋ ವೋಲ್ಟೇಜ್ ವಿದ್ಯುತ್ ಶಕ್ತಿಯಿಂದ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ವಿದ್ಯುತ್ ಶಕ್ತಿ ಸದಾ ನಿಯಂತ್ರಣದಲ್ಲಿ ಇರಬೇಕಾಗುತ್ತದೆ. ವಿದ್ಯುತ್ ಶಕ್ತಿಯ ಹೇಗೆ ನಿಯಂತ್ರಣದಲ್ಲಿರುತ್ತದೆಯೋ ಅದೇ ರೀತಿ ದೇಹದಲ್ಲಿರುವ ಗ್ಲುಕೋಸ್ ಎಂಬ ಶಕ್ತಿ ಕೂಡಾ ನಿಯಂತ್ರಣದಲ್ಲಿರತಕ್ಕದ್ದು. ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸಲು ಹೇಗೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇದೆಯೋ ಅದೇ ರೀತಿ ದೇಹದಲ್ಲಿರುವ ಅಂಗಾಂಗಗಳಿಗೆ, ಗ್ರಂಥಿಗಳಿಗೆ ಹಾಗೂ ಮೆದುಳು ಕಾರ್ಯನಿರ್ವಹಿಸಲು ಗ್ಲುಕೋಸ್ ಎಂಬ ಶಕ್ತಿಯ ಅವಶ್ಯಕತೆ ಇರುತ್ತದೆ. ಈ ಗ್ಲುಕೋಸ್ ಎಂಬ ಶಕ್ತಿ ವಿದ್ಯುತ್ ಶಕ್ತಿ ಹಾಗೆ ಹೆಚ್ಚುವಾಗಬಾರದು ಕಡಿಮೆಯೂ ಆಗಬಾರದು. ಅದು ಸದಾ ನಿಯಂತ್ರಣದಲ್ಲಿ ಇರತಕ್ಕದ್ದು. ಮೇದೋಜೀರಕ ಗ್ರಂಥಿಯು (pancreas) ಉತ್ಪಾದನೆ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್
ಈ ಗ್ಲುಕೋಸ್ ಎಂಬ ಶಕ್ತಿಯನ್ನು ಸದಾ ನಿಯಂತ್ರಣದಲ್ಲಿ ಇಡುತ್ತದೆ. ದುರದೃಷ್ಟಕರವಾಗಿ ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿ ಸರಿಯಾದ ಕ್ರಮದಲ್ಲಿ ಇಲ್ಲದೆ ಇರುವುದರಿಂದ ಮೇದೋಜೀರಕ ಗ್ರಂಥಿಯು (pancreas) ಚಿಕ್ಕ ವಯಸ್ಸಿನಲ್ಲೇ ತನ್ನ ಕೆಲಸವನ್ನು ನಿಲ್ಲಿಸುತ್ತದೆ ಹೀಗಾಗಿ ರಕ್ತದಲ್ಲಿರುವ ಗ್ಲುಕೋಸ್ ಅನ್ನು ನಿಯಂತ್ರಿಸುವ ಇನ್ಸುಲಿನ್ ಇಲ್ಲದಾಗಿ ಬಿಡುತ್ತದೆ. ಇದರಿಂದ ನಾವು ಮಧುಮೇಹ ಕಾಯಿಲೆಗೆ ತುತ್ತಾಗಿ ಬಿಡುತ್ತೇವೆ. ನಾವು ತಿನ್ನುವ ಆಹಾರದಲ್ಲಿ ಕಲಬೆರಿಕೆ ಇರುವುದು, ಉಸಿರಾಡಲು ಶುದ್ಧವಾದ ಗಾಳಿ ಇಲ್ಲದೆ ಇರುವುದು, ಮಾನಸಿಕ ಹಾಗೂ ದೈಹಿಕ ಒತ್ತಡ ಇವತ್ತು ಎಲ್ಲರನ್ನೂ ಆವರಿಸಿಕೊಂಡಿವೆ. ಅತಿಯಾಗಿ ತಿನ್ನುವುದು, ಚಟಗಳನ್ನು ಮಾಡುವುದು ಹಾಗೂ ಮೊಬೈಲ್ ಉಪಯೋಗ ಮಾಡುವುದರಲ್ಲಿ ನಮ್ಮನು ನಾವು ತೊಡಗಿಸಿಕೊಂಡು ನಿದ್ರೆಗೆಡುವ ಪ್ರವೃತ್ತಿ ಬೆಳೆಸಿಕೊಂಡುಬಿಟ್ಟಿದ್ದೇವೆ. ಇನ್ನು ದೊಡ್ಡ ವಿದೇಶಿ ಕಂಪನಿಗಳಲ್ಲಿ ಲಕ್ಷಾಂತರ ಉದ್ಯೋಗಿಗಳು ಗಾಳಿ ಬೆಳಕು ಬಾರದೇ ಇರುವ ಏರ್ ಕಂಡೀಷನರ್ ರೂಮಿನಲ್ಲಿ ಟ್ಯೂಬ್ ಲೈಟ್ ಬೆಳಕಿನ ಮಧ್ಯ ಲ್ಯಾಪ್ಟಾಪ್ ಮುಂದೆ ಕುಳಿತು ಕಣ್ಣು ಪಿಳುಕಿಸದೆ ಬೆಳಗಿನಿಂದ ಸಂಜೆಯ ತನಕ ಒತ್ತಡದ ಕೆಲಸವನ್ನು ಮಾಡುತ್ತಾರೆ. ಪ್ರಕೃತಿ ಮಡಿಲಿನಲ್ಲಿ ನಾವು ಸಮಯವನ್ನು ಕಳೆಯುತ್ತಿಲ್ಲ. ಹೀಗಾಗಿ ಇವತ್ತು ನಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಇಲ್ಲ. ಪ್ರಕೃತಿಗೆ ವಿರುದ್ಧವಾಗಿರುವ ಇಂತಹ ಅಂಶಗಳಿಂದ ಭಯಾನಕ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಭಯಾನಕ ಕಾಯಿಲೆಗಳ ಪೈಕಿ ಮಧುಮೇಹ ಕೂಡ ಒಂದು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. (ಮನೆಮನೆಯಲ್ಲಿ ಮಧುಮೇಹ)

Share.
Leave A Reply

You cannot copy content of this page

error: Content is protected !!
Exit mobile version