ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯ ಬಡವಾಗಿ ಬದುಕಲು ಇಷ್ಟಪಡುವುದಿಲ್ಲ. ಶ್ರೀಮಂತನಾಗಿ ಬದುಕಬೇಕೆಂಬ ಆಸೆಯಿಂದ ನಿರಂತರವಾಗಿ ಶ್ರಮ ಪಡುತ್ತಿರುತ್ತೇವೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ದುಡಿಮೆಗೆ ಸರಿಯಾದ ಪ್ರತಿಫಲ ಸಿಗುವುದಿಲ್ಲ. ಕೆಲಸ ಮಾಡುವ ಸಂಸ್ಥೆಯಲ್ಲಿ ಎಷ್ಟೇ ಶ್ರದ್ಧೆಯಿಂದ, ಸತ್ಯವಂತಿಕೆಯಿಂದ, ಕಾರ್ಯದಕ್ಷತೆಯಿಂದ ಹಾಗೂ ಒಳ್ಳೆಯ ಕೌಶಲ್ಯದಿಂದ ಸೇವೆ ಸಲ್ಲಿಸಿದರೂ ಸಂಬಳ ಹೆಚ್ಚಿಗೆ ಸಿಗಲಾರದು ಹಾಗೂ ಪ್ರಮೋಷನ್ ಕುರಿತಾದ ಕನಸು ಕನಸಾಗಿಯೇ ಉಳಿದಿರುತ್ತದೆ. ಇನ್ನು ಬಂಡವಾಳ ತೊಡಗಿಸಿ ಏನಾದರೂ ಸ್ವಂತ ಉದ್ದೋಗ ಮಾಡಲು ಹೊರಟರೆ ವಹಿವಾಟು ಸರಿಯಾಗಿ ನಡೆಯುವುದಿಲ್ಲ ಹಾಗೂ ಕೆಲವೊಮ್ಮೆ ತೊಡಗಿಸಿದ ಬಂಡವಾಳ ಕೂಡ ತಿರುಗಿ ಬಾರದೆ ನಷ್ಟ ಅನುಭವಿಸಬೇಕಾಗುತ್ತದೆ. ಏನೇ ತಂತ್ರಗಾರಿಕೆ ಮಾಡಿ ಬಿಸಿನೆಸ್ ಸಕ್ಸಸ್ ಮಾಡಲು ಹೊರಟರೂ ಕೂಡ ಬಿಸಿನೆಸ್ನಲ್ಲಿ ಸಫಲತೆ ಕಾಣುವುದಿಲ್ಲ. ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಷ್ಟು ಲಕ್ಷ್ಮಿ ದೇವಿಯು ಕೃಪೆ ತೋರುವುದಿಲ್ಲ! ಬುದ್ಧಿವಂತಿಕೆ ಇರುತ್ತದೆ, ಒಳ್ಳೆಯ ಪದವಿ ಪಡೆದುಕೊಂಡಿರುತ್ತಾರೆ, ಒಳ್ಳೆಯ ಕೌಶಲ್ಯವಿರುತ್ತದೆ, ಶ್ರಮ ಪಟ್ಟು ದುಡಿಯುವ ಮನೋಭಾವ ಹೊಂದಿರುತ್ತಾರೆ, ಒಳ್ಳೆಯ ಜ್ಞಾಪಕ ಶಕ್ತಿ ಇರುತ್ತದೆ ಹಾಗೂ ಅತ್ಯಂತ ಪ್ರಭಾವಕಾರಿ ರೀತಿಯಲ್ಲಿ ಸಂವಾದನ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ, ಐದಾರು ಭಾಷೆಗಳನ್ನು ಮಾತನಾಡಬಲ್ಲವರಾಗಿರುತ್ತಾರೆ. ತಮ್ಮ ಬಹು ಸಂಯೋಜನಾ ಕೌಶಲ್ಯಗಳನ್ನು ಉಪಯೋಗಿಸಿ ಬಿಸಿನೆಸ್ ಅಥವಾ ತಮ್ಮ ಉದ್ಯೋಗದಲ್ಲಿ ಸಕ್ಸಸ್ ಪಡೆದು ಶ್ರೀಮಂತರಾಗಬೇಕೆಂದು ಹೊರಟರೂ ಕೂಡ ಕರ್ಮ ರಿಜೆಕ್ಟ್ ಮಾಡಿಬಿಡುತ್ತದೆ!

ಇನ್ನು ಕೆಲವರನ್ನು ದುಡ್ಡು ಹುಡಕಿಕೊಂಡು ಬರುತ್ತದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವೇ. ಅತ್ಯಂತ ಕಡು ಬಡತನದಲ್ಲಿ ಹುಟ್ಟಿರುತ್ತಾರೆ. ತಿನಲ್ಲಿಕೆ ಒಪ್ಪತ್ತಿಗೆ ಊಟ ಇರುವುದಿಲ್ಲ, ಇರಲಿಕ್ಕೆ ಮನೆ ಇರುವುದಿಲ್ಲ ಹಾಗೂ ಧರಿಸಲಿಕ್ಕೆ ಸರಿಯಾದ ಬಟ್ಟೆ ಹಾಗೂ ಚಪ್ಪಲಿ ಇರುವುದಿಲ್ಲ. ಆದರೂ ಕೂಡ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರು ಆದಂತೆ ಅವರ ಜೀವನ ಪವಾಡ ಸದೃಶ ರೀತಿಯಲ್ಲಿ ದೊಡ್ಡ ಬದಲಾವಣೆ ಆಗಿಬಿಡುತ್ತದೆ. ಇವರು ಅತಿ ಕಡಿಮೆ ಶ್ರಮ ವಹಿಸಿ ದೊಡ್ಡ ದೊಡ್ಡ ಸ್ಥಾನಗಳಿಗೆ ಹೋಗಿಬಿಡುತ್ತಾರೆ. ವಿದ್ಯಾವಂತ ಹಾಗೂ ಅವಿದ್ಯಾವಂತ ಎಂಬ ತಾರತಮ್ಯವಿಲ್ಲದೆ ದುಡ್ಡು ದುಡ್ಡು ಹುಡುಕಿಕೊಂಡು ಬರುತ್ತದೆ. ಕೆಲವರಿಗಂತೂ ಯಾವುದೇ ರೀತಿಯ ಅರ್ಹತೆಗಳು ಇರುವುದಿಲ್ಲ. ವಿದ್ಯೆ ಹಾಗೂ ಬುದ್ಧಿ ಎರಡು ಇರುವುದಿಲ್ಲ. ಯಾವುದೇ ಒಂದು ಚಿಕ್ಕ ಕೌಶ್ಯಾಲ ಕೂಡ ಅವರಲ್ಲಿ ಇರುವುದಿಲ್ಲ. ಮಾತೃ ಭಾಷೆ ಸರಿಯಾಗಿ ಓದಲಿಕ್ಕೂ ಬರುವುದಿಲ್ಲ ಆದರೂ ಕೂಡ ಅಂತವರು ಶಿಕ್ಷಣ ಮಂತ್ರಿಗಳು ಆಗಿರುತ್ತಾರೆ! ಯಾವುದೇ ಹೆಚ್ಚಿನ ಶ್ರಮ ವಹಿಸದೆ ದುಡ್ಡು ವರಿಗೆ ಹರಿದು ಬರುತ್ತಿದೆ. ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ ಹುಡುಗನೊಬ್ಬ ನೋಡ ನೋಡುತ್ತಿದ್ದಂತೆ ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ಬೆಳೆದು ನಿಲ್ಲುತ್ತಾನೆ ಹಾಗೂ ದೊಡ್ಡ ದೊಡ್ಡ ಪದವಿ ಪಡೆದ ತರುಣರಿಗೆ ತನ್ನ ಸಂಸ್ಥೆಯಲ್ಲಿ ಕೆಲಸ ನೀಡುತ್ತಾನೆ. ಇನ್ನು ಕೆಲವರು ಹುಟ್ಟಿದ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅತಿ ಕಷ್ಟದ ಪರಿಸ್ಥಿತಿಗೆ ಸಿಲುಕುತ್ತಾರೆ. ಇವರಿಗೆ ಮಾರ್ಗದರ್ಶಕರಾಗಲಿ ಅಥವಾ ಆಸರಿಗೆ ಬಂಧು ಬಳಗದವರಾಗಲಿ ಯಾರೂ ಕೂಡ ಇರುವುದಿಲ್ಲ. ಆದರೆ ದೇವರ ಕೃಪಾಕಟಾಕ್ಷದಿಂದ ಇವರಿಗೆ ಯಾರಾದರು ಮೂಲಕ ಸಹಾಯ ಸಿಗುತ್ತದೆ. ಕಷ್ಟ ಪಟ್ಟು ಒಳ್ಳೆಯ ಶಿಕ್ಷಣ ಪಡೆದು ಅತಿ ದೊಡ್ಡ ಹುದ್ದೆಗಳನ್ನು ಗಿಟ್ಟಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರಿಗೆ ಯಾವುದೇ ವಿದ್ಯೆ ತಲೆಗೆ ಹತ್ತುವುದಿಲ್ಲ ಹಾಗೂ ಯಾವುದೇ ಕೌಶಲ್ಯ ಕೂಡ ಇರುವುದಿಲ್ಲ. ಊಟಕ್ಕೆ ಹೊಟ್ಟೆ ತುಂಬಾ ಅನ್ನ ಇರುವುದಿಲ್ಲ. ಆದರೂ ಕೂಡ ಬೆಳೆಯುತ್ತಾ ಬೆಳೆಯುತ್ತಾ ರಾಜಕಾರಣಿಗಳಾಗಿ ಬೆಳೆದು ನಿಲ್ಲುತ್ತಾರೆ. ಹೋದ ಜನ್ಮದಲ್ಲಿ ಕೆಲವಂದು ವರಗಳು ಇರುವ ಕಾರಣಕ್ಕೆ ಈ ಜನ್ಮದಲ್ಲಿ ರಾಜಕೀಯ ಸ್ಥಾನ ಪಡೆದು ನಲವತ್ತು ಐವತ್ತು ವರ್ಷಗಳ ಕಾಲ ಯಾವತ್ತೂ ಚುನಾವಣೆಯಲ್ಲಿ ಸೋಲದೆ ರಾಜಕೀಯ ನಡೆಸುತ್ತಾರೆ. ಇಂತವರಿಗೆ ದುಡ್ಡು ಹುಡುಕಿಕೊಂಡು ಹೋಗುತ್ತದೆ. ಅಸಾಧಾರಣ ಪ್ರತಿಭೆ ಇರುವ ಮನುಷ್ಯ ಅನುಭವಿಸಬೇಕಾಗುತ್ತದೆ ಹಾಗೂ ಯಾವುದೇ ಕೌಶಲ್ಯವಿರದ ಶತದೊಡ್ಡ ಶ್ರೀಮಂತನಾಗಿ ಮೆರೆಯುತ್ತಾನೆ. ಇಷ್ಟಕ್ಕೆಲ್ಲ ಕಾರಣ ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಫಲ. ಕರ್ಮ ಕಣ್ಣಿಗೆ ಕಾಣದೆ ಇರಬಹುದು ಆದರೆ ಅದು ಯಾರನ್ನು ಬಿಡುವುದಿಲ್ಲ!

ಪೂರ್ವ ಜನ್ಮದಲ್ಲಿ ಮಾಡಿದ ಕರ್ಮ ಫಲಕ್ಕೆ ಅನುಗುಣವಾಗಿ ಈ ಜನ್ಮದಲ್ಲಿ ಶ್ರೀಮಂತನಾಗಬೇಕೂ ಅಥವಾ ಬಡವನಾಗಬೇಕೂ ಎಂಬ ನಿರ್ಧಾರವಾಗುತ್ತದೆ. ಹಾಗಾದರೆ ಕರ್ಮ ಎಂದರೇನು? For every action there is an equal and opposite reaction ಎಂಬ ಈ ನಿಯಮ ಭೌತ ಜಗತ್ತಿಗೆ ಮಾತ್ರ ಅನ್ವಯವಾಗುವುದಿಲ್ಲ. ಇದು ಭೌತಿಕವಲ್ಲದ ಜಗತ್ತಿಗೂ ಅನ್ವಯಿಸುತ್ತದೆ. ನಮ್ಮ ಜೀವನದಲ್ಲಿ ಯಾವುದೇ ಒಂದು ಕ್ರಿಯೆಯನ್ನು ಮಾಡಿದರೆ ಅದಕ್ಕೆ ಸಮನಾದ ಪ್ರತಿಕ್ರಿಯೆ ನಮ್ಮ ಜೀವನದ ಮೇಲೆ ಆಗಿಯೇ ಆಗುತ್ತದೆ. ಈ ಜನ್ಮದಲ್ಲಿ ಮಾಡಿದ ಕ್ರಿಯೆಗೆ ಸಮಾನವಾದ ಪ್ರತಿಕ್ರಿಯೆ ಮುಂದಿನ ಜನ್ಮದಲ್ಲೂ ಕೂಡ ಆಗುತ್ತದೆ. ಈ ರೀತಿ ಕ್ರಿಯೆಗೆ ಉಂಟಾಗುವ ಪ್ರತಿಕ್ರಿಯೆಗೆ ಕರ್ಮ ಎಂದು ಹೇಳುತ್ತಾರೆ. ಕರ್ಮ ಎಂಬುದು ಸಾರ್ವತ್ರಿಕವಾದದ್ದು. ಸೂಕ್ಷ್ಮಾಣು ಜೀವಿಯಿಂದ ಹಿಡಿದು ಮನುಷ್ಯನ ತನಕ ಕರ್ಮ ಅನ್ವಯವಾಗುತ್ತದೆ. ಕರ್ಮಕ್ಕೆ ಅನುಗುಣವಾಗಿ ಆತ್ಮವು ವಿಕಸನ ಹೊಂದುತ್ತಾ ಹೊಂದುತ್ತಾ ಸೂಕ್ಷ್ಮಾಣು ಜೀವಿಯ ದೇಹದಿಂದ ಮನುಷ್ಯನ ದೇಹವನ್ನು ತಲುಪುತ್ತದೆ. ಕರ್ಮಕ್ಕೆ ಅನುಗುಣವಾಗಿ ನಮ್ಮ ಜೀವನ ರೂಪಗೊಳ್ಳುತ್ತದೆ.

ಕರ್ಮ ಸಿದ್ಧಾಂತವು ಭಾರತೀಯ ತತ್ತ್ವಶಾಸ್ತ್ರದ ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬನ ಕರ್ಮ (ಕಾರ್ಯಗಳು ಮತ್ತು ಆಲೋಚನೆಗಳು) ಅವನ ಜೀವನವನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ವಿವರಿಸುತ್ತದೆ. ಇದು ಮೂಲತಃ “ನೀವು ಎಂತಹ ಕೆಲಸಗಳನ್ನು ಮಾಡುತ್ತೀರೂ ಅದರ ಪ್ರಕಾರ ನಿಮಗೆ ಫಲ ಸಿಗುತ್ತದೆ ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಕರ್ಮವನ್ನು ಮೂರು ಪ್ರಕಾರಗಳಲ್ಲಿ ವಿಭಜಿಸಲಾಗಿದೆ. ಮೊದಲನೆಯದು ಪ್ರಾರಬ್ಧ ಕರ್ಮ. ಈ ಜನ್ಮದಲ್ಲಿ ಅನುಭವಿಸುವ ಕರ್ಮ ಫಲಗಳು. ಎರಡನೆಯದು ಸಂಚಿತ ಕರ್ಮ. ಇವು ಹಿಂದೆ ಮಾಡಿದ ಕರ್ಮಗಳ ಪುಣ್ಯ ಪಾಪಗಳ ಸಂಗ್ರಹ. ಮೂರನೆಯದು ಆಗಾಮಿ ಕರ್ಮ. ಭವಿಷ್ಯದಲ್ಲಿ ಮಾಡಲಿರುವ ಕರ್ಮಗಳು ಆಗಾಮಿ ಕರ್ಮ ಎಂದು ಕರೆಯುತ್ತಾರೆ. ಆಗಾಮಿ ಕರ್ಮದ ಫಲಗಳನ್ನು ಮುಂದಿನ ಜನ್ಮದಲ್ಲಿ ಅನುಭವಿಸಬೇಕು. ಕರ್ಮ ಸಿದ್ಧಾಂತವು ಪ್ರತಿಯೊಬ್ಬನ ಬದುಕು ಅವನ ತನ್ನ ಕಾರ್ಯಗಳ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಹೇಳುತ್ತದೆ. ಇದು ಗಮನಿಸಿದ ದಾರಿ, ಭವಿಷ್ಯದ ಫಲಗಳು ಮತ್ತು ಬದುಕಿನ ಎಲ್ಲಾ ಅಂಶಗಳನ್ನು ಸಮನ್ವಯಗೊಳಿಸುತ್ತದೆ.

“ಅಯ್ಯೋ ದೇವರೆ ಅವರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಪಾಪದ ಕೆಲಸ ಮಾಡ್ತಾರೆ. ದೇವರು ಅಂತವರಿಗೆ ಒಳ್ಳೆಯದನ್ನು ಮಾಡುತ್ತಾನೆ. ಕೋಟಿ ಕೋಟಿ ದುಡ್ಡು ಸಂಪಾದಿಸುತ್ತಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನವೇ ಆಗುತ್ತದೆ. ದೇವರು ಕೆಟ್ಟವರಿಗೆ ಮಾತ್ರ ಒಳ್ಳೆಯದನ್ನು ಮಾಡುತ್ತಾನೆ ಹಾಗೂ ಒಳ್ಳೆಯವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ಕಷ್ಟವನ್ನು ಕೊಡುತ್ತಾನೆ” ಎಂದು ಮಾತನಾಡುತ್ತಿರುತ್ತೇವೆ. ಪಾಪದ ಕೆಲಸಗಳನ್ನು ಮಾಡುವವರು ಶ್ರೀಮಂತರಾಗುತ್ತಿರುತ್ತಾರೆ ಹಾಗೂ ಅವರಿಗೆ ಒಳ್ಳೆಯದಾಗುತ್ತಿರುತ್ತದೆ ಇದಕ್ಕೆ ಮುಖ್ಯ ಕಾರಣ ಅವರು ಮಾಡಿದ ಪೂರ್ವ ಜನ್ಮದಲ್ಲಿನ ಪುಣ್ಯಕರ್ಮಗಳು. ಆದರೆ ಈ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳಿಗೆ ಪ್ರಾಯಶ್ಚಿತ ಮುಂದಿನ ಜನ್ಮದಲ್ಲಿ ತಪ್ಪಲಾರದು. ಇನ್ನು ಪ್ರಾಮಾಣಿಕರಿಗೆ, ಅಪರೂಪಕಾರಿ ಕೆಲಸ ಮಾಡುವವರಿಗೆ, ಧರ್ಮ ನಿಷ್ಠರಿಗೆ, ಒಳ್ಳೆಯವರಿಗೆ ಎಷ್ಟೇ ಆರ್ಥಿಕ ಕಷ್ಟ ಹಾಗೂ ಐಹಿಕ ಪ್ರಪಂಚದ ಇತರೆ ಸವಾಲುಗಳನ್ನು ಎದುರಾದರೂ ಕೂಡ ಅದಕ್ಕೆ ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಕಾರಣವಾಗುತ್ತವೆ. ಎಷ್ಟೇ ಕಷ್ಟಗಳು ಎದುರಾದರೂ ಧರ್ಮವನ್ನು ಪಾಲಿಸಿಕೊಂಡು ದೇವರ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಂಡು ಒಳ್ಳೆಯ ರೀತಿಯಲ್ಲಿ ಬಾಳಿ ಬದುಕಿದ್ದೆ ಆದರೆ ಅಂಥವರು ಖಂಡಿತವಾಗಿಯೂ ಮುಂದಿನ ಜನ್ಮದಲ್ಲಿ ಅತ್ಯಂತ ಶುಭ ಗಳಿಗೆಯಲ್ಲಿ ಜನ್ಮ ತಾಳುತ್ತಾರೆ ಹಾಗೂ ಶ್ರೀಮಂತ ಕುಟುಂಬದಲ್ಲೇ ಹುಟ್ಟುತ್ತಾರೆ. ಈ ಜನ್ಮದಲ್ಲಿ ಮಾಡಿದ ಕರ್ಮಕ್ಕೆ ಅನುಗುಣವಾಗಿ ನಮ್ಮ ಮುಂದಿನ ಜನ್ಮ ನಿರ್ಧಾರವಾಗುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಅದೇ ರೀತಿ ಪಾಪಕರ್ಮಗಳನ್ನು ಮಾಡಿದವರು ಏನೆಲ್ಲಾ ಕಷ್ಟ, ನಷ್ಟ, ನೋವುಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

ಬಡತನ ಹಾಗೂ ಶ್ರೀಮಂತಿಕೆ ಎರಡೂ ಕೂಡ ಕರ್ಮ ಸಿದ್ಧಾಂತದಿಂದ ಉಂಟಾದ ಅಂಶಗಳು. ಅಯ್ಯೋ ನನ್ನ ಕರ್ಮ ಸರಿ ಇಲ್ಲ ಬಿಡು ಜೀವನ ಇಸ್ಟೇ ಅಂತ ಯೋಚನೆ ಮಾಡುವುದನ್ನು ಬಿಟ್ಟು ಪ್ರಯತ್ನಪಟ್ಟು ಸನ್ಮಾರ್ಗದಲ್ಲಿ ದುಡಿದು ಮುಂದೆ ಬರುವುದರಲ್ಲಿ ತೊಡಗಿಸಿಕೊಳ್ಳಿ. ಸಿಗಬೇಕಾದ ಫಲಾಫಲಗಳು ಖಂಡಿತವಾಗಿಯೂ ಸಿಕ್ಕೇ ಸಿಗುತ್ತವೆ. ನಮ್ಮ ಸ್ವ ಪ್ರಯತ್ನ, ಹುಟ್ಟಿದ ಸಮಯ ಹಾಗೂ ಇರುವ ಮನೆಯ ವಾಸ್ತು ಈ ಮೂರು ಅಂಶಗಳಿಂದ ನಮ್ಮ ಜೀವನ ರೂಪಗೊಳ್ಳುತ್ತದೆ. ಕರ್ಮಕ್ಕೆ ಅನುಗುಣವಾಗಿ ಕೆಟ್ಟ ಗಳಿಗೆಯಲ್ಲಿ ಹುಟ್ಟಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದಿದ್ದರೂ ಕೂಡ ಮನೆಯ ವಾಸ್ತು ಮೂಲಕ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಇನ್ನು ಮನೆಯ ವಾಸ್ತು ತಿದ್ದಿಕೊಳ್ಳಲು ಸಾಧ್ಯವಿದ್ದರೂ ಕೂಡ ಹುಟ್ಟಿದ ಗಳಿಗೆಯನ್ನು ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ. ಕರ್ಮಕ್ಕೆ ಅನುಗುಣವಾಗಿ ಯಾವ ರಾಶಿಯಲ್ಲಿ ಹುಟ್ಟಬೇಕೋ ಹಾಗೂ ಯಾವ ನಕ್ಷತ್ರದಲ್ಲಿ ಹುಟ್ಟಬೇಕೂ ಎಂಬುದು ಪೂರ್ವ ನಿರ್ಧಾರಿತವಾಗಿರುತ್ತದೆ. ಹೀಗಾಗಿ ಜನ್ಮ ಕುಂಡಲಿಯನ್ನು (Horoscope) ಪರಿಷ್ಕರಿಸಲು ಸಾಧ್ಯವಿಲ್ಲ. ಆದರೆ ಪೂಜೆ ಪುನಸ್ಕಾರ, ಧ್ಯಾನ, ಆಧ್ಯಾತ್ಮಿಕ ಸೇವೆ, ದಾನ ಧರ್ಮ, ಪರೋಪಕಾರ ಮಾಡುವ ಮೂಲಕ ಜನ್ಮ ಕುಂಡಲಿಯಲ್ಲಿರುವ ಕೆಲವು ದೋಷಗಳಿಂದ ಉಂಟಾದ ಋಣಾತ್ಮಕ ಶಕ್ತಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಈ ಜನ್ಮದಲ್ಲಿ ಮಾಡುವ ಕರ್ಮಕ್ಕೆ ಅನುಗುಣವಾಗಿ ಮುಂದಿನ ಜನ್ಮದಲ್ಲಿ ಎಂಥ ಗಳಿಗೆಯಲ್ಲಿ ಹುಟ್ಟಬೇಕೆಂಬ ನಿರ್ಧಾರವಾಗುತ್ತದೆ. ನಮ್ಮ ಸ್ವ ಪ್ರಯತ್ನ, ಹುಟ್ಟಿದ ಸಮಯ ಹಾಗೂ ಇರುವ ಮನೆಯ ವಾಸ್ತು ( self luck, Heaven luck and Earth luck) ಈ ಮೂರು ಅಂಶಗಳ ಒಟ್ಟು ಮೊತ್ತದಿಂದ ಸಿಗುವ ಫಲಗಳೇ ಅಂತಿಮ. ಮುಂದಿನ ಜನ್ಮದಲ್ಲಿ ಅಗರ್ಭ ಶ್ರೀಮಂತನ ಮನೆಯಲ್ಲಿ ಹುಟ್ಟಬೇಕೆಂದು ಬಯಸಿದರೆ ಈ ಜನ್ಮದಲ್ಲಿ ಎಷ್ಟೇ ಕಷ್ಟವಿದ್ದರೂ ಧರ್ಮದಿಂದ ನಡೆಯಿರಿ. ಧರ್ಮದಿಂದ ನಡೆದು ಪುಣ್ಯ ಸಂಪಾದಿಸಬೇಕು ಅಥವಾ ಅಡ್ಡ ಹಾದಿ ಹಿಡಿದು ಕೇವಲ ದುಡ್ಡು ಸಂಪಾದಿಸಬೇಕು ಎಂಬುದು ಅವರವರ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು!

Scientific Vastu 👇

https://anveshana.in/science-of-vastu/

ಒಂದು ಶಕ್ತಿ ಇದ್ದದ್ದು ಮತ್ತೊಂದು ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ 👇

https://www.facebook.com/share/p/1GeYw5Brjk/



Share.
Leave A Reply

You cannot copy content of this page

error: Content is protected !!
Exit mobile version