ಸೈಟ್ ಖರೀದಿಸುವಾಗ ವಾಸ್ತು ವಿಶ್ಲೇಷಣೆ. ಮನೆ ಕಟ್ಟುವ ಮೊದಲು ಸೈಟ್ ಕೊಂಡುಕೊಳ್ಳುವಾಗ ಸೈಟ್ ಸುತ್ತಮುತ್ತಲಿರುವ ಹಾಗೂ ಸೈಟದ ಭೌಗೋಳಿಕ ಅಂಶಗಳಿಗೆ ಪ್ರಾಮುಖ್ಯತೆ ಕೊಡಲೇ ಬೇಕು. ಇಲ್ಲದಿದ್ದರೆ ಎಷ್ಟೇ ವಾಸ್ತು ಪ್ರಕಾರ ಮನೆ ಕಟ್ಟಿದರೂ ವಾಸ್ತುವಿನ ಫಲಿತಾಂಶವು ಎಳ್ಳಷ್ಟೂ ಸಿಗಲಾರದು. ಮನೆ ಹೇಗೆ ಕಟ್ಟಿಸುತ್ತೇವೆ ಅನ್ನುವುದಕಿಂತ ಯಾವ ರೀತಿ ಸೈಟ್ ಕೊಂಡುಕ್ಕೊಳ್ಳುತ್ತೇವೆ ಅನ್ನುವುದು ಅತಿ ಮುಖ್ಯವಾದದ್ದು. ಸೈಟ್ ಕೊಂಡುಕೊಳ್ಳುವ ಸಂದರ್ಭದಲ್ಲಿ ಕೆಲವು ಮುಖ್ಯವಾದ ಅಂಶಗಳನ್ನು ನಿರ್ಲಕ್ಷಿಸಿ ಸೈಟ್ ಖರೀದಿಸಿ ಮನೆ ಕಟ್ಟಿದರೆ ವಾಸ್ತು ದೋಷದಿಂದ ಉಂಟಾದ ಸಮಸ್ಯೆಗಳನ್ನು ಪರಿಹಾರ ಮಾಡುವುದು ಸುಲಭ ಸಾಧ್ಯವಿಲ್ಲ. ಸೈಟ್ ಖರೀದಿಸುವಾಗ ನಿರ್ಲಕ್ಷ್ಯ ಮಾಡಿ ಮನೆ ಕಟ್ಟಿದ ಮೇಲೆ ಗುರುಜಿ ಒಬ್ಬನನ್ನು ಮನೆಗೆ ಕರೆದುಕೊಂಡು ಬಂದು ಗುರೂಜಿ ಸೂಚನೆಯಂತೆ ಲಾಪಿಂಗ್ ಬುದ್ದ ಇಟ್ರೆ, ವಿಂಡ್ ಚಾಯ್ಮ್ ಹಾಕಿದ್ರೆ, ಚೀನಿ ನಾಣ್ಯವನ್ನು ತಿಜೋರಿಯಲ್ಲಿ ಇಟ್ರೆ, ಮನಿ ಪ್ಲಾಂಟ್ ನೇಟ್ರೆ, ಕೂದರೆಯ ಲಾಳವನ್ನು ಮನೆಯ ಹೊಸ್ತಿಲಕ್ಕೆ ಹೊಡೆದ್ರೆ, ಮನೆಯ ಮುಖ್ಯ ದ್ವಾರಕ್ಕೆ ಅಷ್ಟಭುಜಾಕೃತಿಯ ಕನ್ನಡಿ ಒಂದನ್ನು ಹಾಕಿದ್ರೆ ಧನಾತ್ಮಕ ಶಕ್ತಿಗಳು ಸಿಗುತ್ತವಾ? ಕೇವಲ 15 ಸಾವಿರ ಆಗುತ್ತೆ ಆದ್ರೆ ಆಫರ್ ಇದೆ ಈಗ. ಆಫರ್ ಪ್ರೈಸಲ್ಲಿ 10 ಸಾವಿರಕ್ಕೆ ಇಷ್ಟೆಲ್ಲ ವಾಸ್ತು ದೋಷವನ್ನು ನಿವಾರಿಸುವ ಯಂತ್ರಗಳನ್ನು ನಿಮ್ಮ ಮನೆಗೆ ಕಾಕಿಕೊಡುತ್ತೇನೆ. 100ಕ್ಕೆ 200ರಷ್ಟು ಪಕ್ಕಾ ಫಲಿತಾಂಶ 30 ರಿಂದ 90 ದಿನಗಳಲ್ಲಿ ಸಿಕ್ಕುಬಿಡುತ್ತೆ ಅಂತ ಗುರೂಜಿ ಹೇಳಿಬಿಡುತ್ತಾರೆ. ಹೇಗೋ ಒಳ್ಳೆಯದು ಆದ್ರೆ ಸಾಕು ಅಂತ ಖುಷಿಯಿಂದ ದುಡ್ಡು ಕೊಟ್ಟು ವಾಸ್ತು ದೋಷ ನಿವಾರಣಾ ಯಂತ್ರಗಳನ್ನು ಗುರುಜಿಯಿಂದ ಪಡೆದು ಮನೆಯಲ್ಲಿ ಹಾಕಿಕೊಂಡು ಬಿಡುತ್ತೀರಿ.
ಈ ಕುರಿತು ಪಾರದರ್ಶಕವಾಗಿ ಹೇಳ್ಬೇಕು ಅಂದ್ರೆ, 100ಕ್ಕೆ ಎಷ್ಟರ ಮಟ್ಟಿಗೆ ಈ ವಾಸ್ತು ದೋಷ ನಿವಾರಣಾ ಯಂತ್ರಗಳು ಫಲಿತಾಂಶವನ್ನು ಕೊಡುತ್ತವೆ ಅನ್ನುವುದು ನಮ್ಮ ಮನೆಯ ಸುತ್ತ ಮುತ್ತಲಿನ ಪರಿಸರ ಹಾಗೂ ಅನೇಕ ಭೌಗೋಳಿಕ ಅಂಶಗಳಿಗೆ ಅನುಗುಣವಾಗಿರುತ್ತದೆ. ಮನೆಯಲ್ಲಿರುವ ಒಂದು ಟ್ಯೂಬ್ ಲೈಟ್ ಉರಿಯಬೇಕು ಅಂದ್ರೆ ಮನೆಯ ಹೊರಗಡೆಯಿಂದ ತಂತಿಗಳ ಮೂಲಕ ವಿದ್ಯುತ್ತ ಶಕ್ತಿ ಬರಬೇಕು ಆಗ ಮಾತ್ರ ಟ್ಯೂಬ್ ಲೈಟ್ ಉರಿಯುತ್ತದೆ. ಅದೇ ರೀತಿ ಮನೆಯಲ್ಲಿ ಹಾಕಿರುವ ವಾಸ್ತು ದೋಷ ನಿವಾರಣಾ ಯಂತ್ರಗಳು ಕೆಲಸ ಮಾಡ್ಬೇಕು ಅಂದ್ರೆ ಮನೆಯ ಹೊರಗಡೆಯಿಂದ ಪ್ರಕೃತಿಯಲ್ಲಿನ ಶಕ್ತಿಗಳ ಸಂಚಲನವಾಗಬೇಕು. ಉದಾಹರಣೆಗೆ ಒಂದು ಮನಿ ಪ್ಲಾಂಟ್ ಬಳ್ಳಿಯನ್ನು ಮನೆಯಲ್ಲಿ ಬೆಳಿಸಿದರೆ ಅದಕ್ಕೆ ಸರಿಯಾದ ಗಾಳಿ ಮತ್ತು ಬೆಳಕು ಬೇಕು. ಗಾಳಿ ಮತ್ತು ಬೆಳಕಿನ ಕೊರತೆ ಆದ್ರೆ ಸರಿಯಾದ ಶಕ್ತಿ ಸಂಚಲನವಾಗುವದಿಲ್ಲ ಹಾಗೂ ಮನಿ ಪ್ಲಾಂಟದಿಂದ ಸಿಗಬೇಕಾದ ಗರಿಷ್ಠ ಫಲಿತಾಂಶ ಸಿಗುವುದಿಲ್ಲ. ಇಲ್ಲಿ ಮತ್ತೊಂದು ಉದಾಹರಣೆಗೆ ಕೊಡುತ್ತೇನೆ. ಮನೆಯಲ್ಲಿ ಕಾಸ್ಮಿಕ್ ಶಕ್ತಿಯನ್ನು ವೃದ್ಧಿಪಡಿಸಿ ವಾಸ್ತು ದೋಷಗಳನ್ನು ನಿವಾರಿಸುವ ಸಲುವಾಗಿ ಮನೆಯೊಳಗೆ ಪಿರಮಿಡ್ಡುಗಳನ್ನು ಕೂಡ್ರಿಸಲಾಗುತ್ತದೆ. ಆದ್ರೆ ಆ ಪಿರಮಿಡ್ದಗಳು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಬೇಕು ಅಂದ್ರೆ ಮನೆಯ ಈಶಾನ್ಯ ಭಾಗ (ದೇವ ಮೂಲೆ) ಕತ್ತರಿಸಿರಬಾರದು ಹಾಗೂ ಮುಚ್ಚಿಕೊಂಡಿರಬಾರದು. ಏಕಂದ್ರೆ ಮನೆಗೆ ಈಶಾನ್ಯ ಭಾಗದಿಂದ ಕಾಸ್ಮಿಕ್ ಶಕ್ತಿ ಸಂಚಲನವಾಗುತ್ತದೆ. ಈಶಾನ್ಯ ಭಾಗ ಮುಚ್ಚಿದರೆ ಅಥವಾ ಕತ್ತರಿಸಲ್ಪಟ್ಟಿದ್ದರೆ ಕಾಸ್ಮಿಕ್ ಶಕ್ತಿ ಮನೆಗೆ ಸಿಗಲಾರದು. ಇದರಿಂದಾಗಿ ಅಂತಹ ಮನೆಗಳಲ್ಲಿ ಕೂಡ್ರಿಸಿದ ಪಿರಮಿಡ್ಡಗಳು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಲಾರವು. ಅತಿ ಹೆಚ್ಚು ಅಂದ್ರೆ 50 ರಿಂದ 60 ರಷ್ಟು ಧನಾತ್ಮಕ ಶಕ್ತಿಗಳ ಫಲಿತಾಂಶ ಸಿಗಬಹುದು. ಆದ್ದರಿಂದ ಸೈಟ್ ಕೊಳ್ಳುವಾಗ ಸೈಟಿನ ಭೌಗೋಳಿಕ ಅಂಶಗಳಿಗೆ ಪ್ರಾಮುಖ್ಯತೆ ಕೊಡಬೇಕಾಗುತ್ತದೆ.
ಆದ್ದರಿಂದ ಸೈಟ್ ಖರೀದಿಸುವುದಕ್ಕಿಂತ ಮೊದಲು ಯಾವ ಯಾವ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂಬುದರ ಕುರಿತು ಇಲ್ಲಿ ಚರ್ಚಿಸೋಣ. ಮೊದಲನೆಯದಾಗಿ ಸೈಟನ ಪೂರ್ವ ಭಾಗ ಇಳಿಜಾರು ಇರಬೇಕು ಹಾಗೂ ಉತ್ತರದ ಭಾಗ ಇಳಿಜಾರಿ ಇರಬೇಕು. ಮಳೆ ಆಗುವ ಸಂದರ್ಭದಲ್ಲಿ ನೀರು ಉತ್ತರ ಅಥವಾ ಪೂರ್ವ ದಿಕ್ಕಿಗೆ ಹರಿದು ಹೋಗಬೇಕು. ಇಂತಹ ಸೈಟುಗಳು ಅತ್ಯಂತ ಶುಭಕರವಾಗಿರುತ್ತವೆ. ಸೈಟನ ಪೂರ್ವ ಮತ್ತು ಉತ್ತರಕ್ಕೆ ಹೊಳೆ, ನೀರಿನ ಪ್ರವಾಹ, ಅಥವಾ ಕೆರೆಗಳು ಇದ್ದರೆ ಇನ್ನೂ ಉತ್ತಮ. ಏಕೆಂದರೆ ಈಶಾನ್ಯ ಭಾಗದಿಂದ ಬರುವ ಕಾಸ್ಮಿಕ್ ಶಕ್ತಿ ನೀರಿನೊಂದಿಗೆ ಸಂವಹನಗೊಂಡು ಅನಂತವಾದ ಜೈವಿಕ ಶಕ್ತಿಯ (bioenergy) ಸಂಚಲನವಾಗುತ್ತದೆ.
ಸೈಟಿನ ಪೂರ್ವ ಮತ್ತು ಉತ್ತರ ಭಾಗಕ್ಕೆ ಎತ್ತರವಾದ ಗಿಡಗಳಿರುವ ಅಥವಾ ಪರ್ವತಗಳಿರುವ ಸೈಟನ್ನು ಖರೀದಿಸಬಾರದು ಏಕೆಂದರೆ ಸೂರ್ಯೋದಯವಾಗುವ ಸಮಯದಲ್ಲಿ ಪೂರ್ವದಿಕ್ಕಿನಿಂದ ಬರುವ ಸೂರ್ಯನ ಬೆಳಕಿಗೆ ಅಡೆತಡೆ ಉಂಟಾಗುತ್ತದೆ. ಸೂರ್ಯನ ಬೆಳಕು 7 ಬಣ್ಣಗಳ ಮಿಶ್ರಣದಿಂದ ಆಗಿರುತ್ತದೆ. ಸೂರ್ಯನ ಬೆಳಕಿನಲ್ಲಿರುವ 7 ಬಣ್ಣಗಳು ಭೂಮಿಯ ಮೇಲೆ ಬೇರೆಬೇರೆಯಾದ 7 ಪ್ರಭಾವಗಳನ್ನು ಮಾಡುತ್ತವೆ. ಸೂರ್ಯನ ಬೆಳಕಿನಲ್ಲಿ ‘ಡಿ’ ವಿಟಮಿನ್ ಇದೆ ಹಾಗೂ ಅನೇಕ ರೋಗಗಳು ಸೌರ ಚಿಕಿತ್ಸಾ ವಿಧಾನದಿಂದ ಗುಣವಾಗುತ್ತವೆ ಎಂಬುದು ವೈಜ್ಞಾನಿಕವಾಗಿ ದೃಢವಾಗಿದೆ. ಸೂರ್ಯನ ಬೆಳಕಿನಲ್ಲಿ ವಿಜ್ಞಾನಕ್ಕೆ ನಿಲುಕದ ಅನೇಕ ಶಕ್ತಿಗಳಿವೆ. ಇಂತಹ ಶಕ್ತಿಗಳನ್ನು ರಿಸೀವ್ ಮಾಡಿಕೊಂಡು ಗರಿಷ್ಠವಾದ ಧನಾತ್ಮಕ ಫಲಿತಾಂಶವನ್ನು ಪಡೆಯಬೇಕು ಅಂದರೆ ಸೈಟನ ಪೂರ್ವ ಮತ್ತು ಉತ್ತರ ಭಾಗಕ್ಕೆ ಯಾವುದೇ ಎತ್ತರವಾದ ಗಿಡ-ಮರಗಳು, ದೊಡ್ಡ ದೊಡ್ಡ ಕಟ್ಟಡಗಳು ಅಥವಾ ಪರ್ವತಗಳು ಇಲ್ಲದೆ ಇರುವ ಸೈಟುಗಳನ್ನು ಖರೀದಿಸತಕ್ಕದ್ದು.
(ಸೈಟ್ ಖರೀದಿಸುವಾಗ ವಾಸ್ತು ವಿಶ್ಲೇಷಣೆ) ಸೈಟಿನ ಪಶ್ಚಿಮ ಮತ್ತು ದಕ್ಷಿಣ ಭಾಗಕ್ಕೆ ಎತ್ತರವಾಗಿರುವ ಗಿಡಮರಗಳು, ಕಟ್ಟಡಗಳು, ಪರ್ವತಗಳು, ಇರುವ ಸೈಟ್ ಅತ್ಯಂತ ಶುಭಕರ. ಏಕೆಂದರೆ ಸೂರ್ಯ ಅಸ್ತಂಗತವಾಗುವ ಸಮಯದಲ್ಲಿ ಸೂರ್ಯನ ಬೆಳಕಿನಲ್ಲಿ ಅಪಾಯಕಾರಿಯಾದ ನೇರಳಾತೀತ ಮತ್ತು ನಸುಗೆಂಪು ಕಿರಣಗಳಿರುತ್ತವೆ. ಸೈಟಿನ ಪಶ್ಚಿಮ ಮತ್ತು ದಕ್ಷಿಣದ ಭಾಗದಲ್ಲಿರುವ ಎತ್ತರವಾದ ಗಿಡಮರಗಳು, ಕಟ್ಟಡಗಳು ಹಾಗೂ ಪರ್ವತಗಳು ಇಂತಹ ಅಪಾಯಕಾರಿ ಕಿರಣಗಳಿಂದ ರಕ್ಷಿಸುತ್ತವೆ. ಆದ್ದರಿಂದ ಇಂತಹ ಸೈಟುಗಳನ್ನು ತಕ್ಷಣ ಖರೀದಿ ಮಾಡಬಹುದು.
ಉತ್ಕೃಷ್ಟ ವಿದ್ಯುತ್ ಶಕ್ತಿ ಸರಬರಾಜು ಮಾಡುವ ತಂತಿಗಳು ಸೈಟಿನ ಹತ್ತಿರ ಇರಬಾರದು ಏಕೆಂದರೆ ವಿದ್ಯುತ್ಕಾಂತೀಯ ಶಕ್ತಿಯ ಸಂವಹನದಿಂದ ಎಲ್ಲವೂ ಋಣಾತ್ಮಕವಾಗಿ ಪರಿವರ್ತನೆ ಹೊಂದುತ್ತದೆ. ಆದ್ದರಿಂದ ಉತ್ಕೃಷ್ಟ ಶಕ್ತಿ ಹೊಂದಿದ ವಿದ್ಯುತ್ ಸರಬರಾಜು ಮಾಡುವ ತಂತಿಗಳ ಕೆಳಗಿರುವ ಸೈಟುಗಳನ್ನು ಖರೀದಿಸಬಾರದು.
ಈ ರೀತಿಯ ಮುಖ್ಯ ಅಂಶಗಳುನ್ನು ಸೈಟ್ ಖರೀದಿ ಮಾಡುವ ಸಮಯದಲ್ಲಿ ಪರಿಗಣಿಸಿ ಖರೀದಿ ಮಾಡಿ ಮನೆ ಕಟ್ಟಿದ್ದೆ ಆದರೆ ಖಂಡಿತವಾಗಿಯೂ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಲನ ಆಗುತ್ತದೆ. ಈ ರೀತಿಯಾಗಿ ಧನಾತ್ಮಕ ಶಕ್ತಿಗಳ ಸಂಚಲನ ಆದಾಗ ಮಾತ್ರ ಮನೆಯಲ್ಲಿ ಇಟ್ಟ ವಾಸ್ತುವಿನ ಯಾವುದೇ ಯಂತ್ರಗಳು 100ಕ್ಕೆ 100ರಷ್ಟು ಫಲಿತಾಂಶ ಕೊಡುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ.